ಕಾಶ್ಮೀರಿ ಸಾಹಿತ್ಯ

ಕಾಶ್ಮೀರೀ ಭಾಷೆಯಲ್ಲಿ ಕಥೆ, ಕಥನ, ಕವನ, ಪದ್ಯ ಲಾವಣಿ, ನುಡಿಗಟ್ಟು ಮುಂತಾದವುಗಳ ರೂಪದಲ್ಲಿ ತನ್ನದೇ ಆದ ಜಾನಪದ ಪರಂಪರೆಯಿದೆ. ಆಡುನುಡಿಯಲ್ಲಿ ನಿಬದ್ಧವಾದ ಈ ಸಾಹಿತ್ಯರಾಶಿ ಕಾಲನ ಗರ್ಭದಲ್ಲಿ ಅಡಗಿಹೋದರೂ ಜನರ ನೆನಪಿನಲ್ಲಿ ಅಳಿದುಳಿದ ಕೃತಿಗಳಲ್ಲಿ ಕಾಶ್ಮೀರದ ಜನಪದ ಭಾವನೆಗಳು ರಾಜ್ಯದ ಸಾಮಾಜಿಕ ಹಾಗೂ ರಾಜನೈತಿಕ ವಿಪ್ಲವಗಳ ಕಡೆಗೆ ಎಷ್ಟರ ಮಟ್ಟಿಗೆ ಸಚೇತನವಾಗಿದ್ದುವೆನ್ನುವುದನ್ನು ಕಾಣಬಹುದು. ಹಿಂದುಗಳ ಹಬ್ಬಗಳಲ್ಲಿ ಹಾಡುವ ಹಾಡುಗಳು ಸ್ವರೂಪ ಮತ್ತು ವಿಷಯಗಳಲ್ಲಿ ಸಮೃದ್ಧವಾಗಿವೆ. ಪ್ರಾಂತೀಯ ಸಂಪ್ರದಾಯಗಳಲ್ಲಿ ವ್ಯತ್ಯಾಸಗಳಿದ್ದರೂ ಭಾರತದ ಸಾಂಸ್ಕøತಿಕ ಐಕ್ಯತೆಗೆ ಸಾಕ್ಷಿಯೆಂದು ಪರಿಗಣಿಸಬಹುದು. ಪರ್ವತಶ್ರೇಣಿಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದರೂ ಕಾಶ್ಮೀರ ಶತಮಾನಗಳಿಂದಲೂ ಭಾರತೀಯ ಸಂಸ್ಕøತಿಗೆ ಸಮೀಪವಾಗಿಯೇ ಇದೆ ಕಾಶ್ಮೀರದ ಗಾದೆಗಳನ್ನಾಗಲಿ ಪದ್ಯಗಳನ್ನಾಗಲಿ ಅಧ್ಯಯನ ಮಾಡುವಾಗ ವೇದ ಉಪನಿಷತ್ತುಗಳ ತತ್ತ್ವಗಳ ಅರಿವಾಗದಿರುವುದಿಲ್ಲ.

 ಮೊಟ್ಟಮೊದಲಿನ ಕಥೆಗಳೆಂದು ಪ್ರಸಿದ್ಧವಾದ ಬೃಹತ್ಕಥೆ ಮತ್ತು ಪಂಚತಂತ್ರಗಳು ಕಾಶ್ಮೀರದಲ್ಲಿಯೇ ಹುಟ್ಟಿದವು. ಇಲ್ಲಿನ ಜನಪದ ಕಥೆಗಳೂ ಕಥಾಸರಿತ್ ಸಾಗರ ಮತ್ತು ಪಂಚತಂತ್ರದ ಕಥೆಗಳಷ್ಟೇ ಸಮೃದ್ಧವಾಗಿವೆ. ಕಾಶ್ಮೀರದ ಹಾಸ್ಯ ಪ್ರವೃತ್ತಿ ಭಾರತದಲ್ಲಿಯೇ ಪ್ರಸಿದ್ಧವಾಗಿದೆ. ಗ್ರಿಯರ್‍ಸನ್ ಕಾಶ್ಮೀರದ ನುಡಿಗಟ್ಟುಗಳನ್ನು ತುಂಬ ಹೊಗಳಿದ್ದಾನೆ. ಕಾಶ್ಮೀರದ ನುಡಿಗಟ್ಟುಗಳ ಗಣಿಗಳನ್ನು ಅಗೆದರೆ ಭಾಷಾವೈಜ್ಞಾನಿಕ ಸತ್ಯಗಳ ಅದರುಗಳು ದೊರಕುತ್ತವೆ. ಹಬ್ಬಹರಿದಿನಗಳಲ್ಲಿ, ಉತ್ಸವಗಳಲ್ಲಿ, ಋತುಗಳಲ್ಲಿ ಮಾತ್ರವಲ್ಲದೆ ಕಸಬಗಾರರು ತಮ್ಮ ಕೆಲಸಗಳಲ್ಲಿ ನಿರತರಾದಾಗ ಹಾಡುವ ಹಾಡುಗಳು, ಅಕ್ ನಂದುನ್ ಹಿಮಾಲ್ ನಗ್‍ರಾಯ್, ಮುಂತಾದ ಲಾವಣಿಗಳು-ಇವೆಲ್ಲ ಕಾಶ್ಮೀರದ ಜನಪದ ಸಾಹಿತ್ಯದ ವೈವಿಧ್ಯಗಳನ್ನು ಮಾತ್ರವಲ್ಲದೆ ಜನಪದ ಗೀತೆಗಳ ರಾಗಗಳನ್ನೂ ಪ್ರತಿಬಿಂಬಿಸುತ್ತವೆ. ಇದರ ಆಧಾರದ ಮೇಲೆಯೇ ಮುಂದಿನ ಭಾವಗೀತೆಗಳು ರಚಿಸಲ್ಪಟ್ಟಿವೆ. ಕಾಶ್ಮೀರಿಯಲ್ಲಿ ಮಕ್ಕಳ ಹಾಡುಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಜನನ, ಉಪನಯನ, ಮದುವೆ, ಮರಣ ಮುಂತಾದ ಧಾರ್ಮಿಕ ಸಮಾರಂಭಗಳ ಹಾಡುಗಳು ಸಾಂಸ್ಕøತಿಕ ದೃಷ್ಟಿಯಿಂದ ಎಷ್ಟು ಸಮೃದ್ಧವಾಗಿವೆಯೋ ಮಾನವ ಜೀವವಿಜ್ಞಾನದ ದೃಷ್ಟಿಯಿಂದಲೂ ಮುಖ್ಯವಾಗಿವೆ.

 ಪ್ರಾಚೀನಯುಗ: ಕ್ರಿ.ಶ. 1500ರ ವರೆಗಿನ ಸಾಹಿತ್ಯ ಪ್ರಾಚೀನಯುಗಕ್ಕೆ ಸೇರುತ್ತದೆ. ಸಂಸ್ಕøತ ಸಾಹಿತ್ಯಕ್ಕೆ ಕಾಶ್ಮೀರದ ಕೊಡುಗೆ ತುಂಬ ಮಹತ್ತ್ವಪೂರ್ಣವಾಗಿದೆಯೆಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ದಾಮೋದರ, ಅಭಿನವಗುಪ್ತ, ಕಲ್ಹಣ, ಬಿಲ್ಹಣ, ಕ್ಷೇಮೇಂದ್ರ ಮುಂತಾದವರ ಹೆಸರುಗಳು ಸಂಸ್ಕøತ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಕಾಶ್ಮೀರದ ಶೈವಾಗಮ ಸಿದ್ಧಾಂತವೂ ಪ್ರಸಿದ್ಧವೇ. ತಮಿಳುನಾಡಿನ ಶೈವಸಿದ್ಧಾಂತವೂ ಇದಕ್ಕೆ ಸಂಬಂಧಿಸಿದ್ದೇ ಆಗಿದೆ. ಕಾಶ್ಮೀರಿ ಪ್ರತ್ಯೇಕ ಭಾಷೆಯಾಗಿ ವಿಕಾಸಗೊಳ್ಳುವುದಕ್ಕೆ ಮೊದಲು ಪ್ರಾಕೃತ ಮತ್ತು ಅಪಭ್ರಂಶದ ಕಾಲವಿತ್ತು. ಆದರೆ ಅದನ್ನು ಕಾಶ್ಮೀರೀ ಪ್ರಾಕೃತ ಅಥವಾ ಕಾಶ್ಮೀರೀ ಅಪಭ್ರಂಶ ಎನ್ನುವುದಕ್ಕೆ ಬೇಕಾದ ಉದಾಹರಣೆಗಳು ಸಿಕ್ಕಿಲ್ಲ. ಕಲ್ಹಣನ ರಾಜತರಂಗಿಣಿಯಲ್ಲಿ ಕಾಶ್ಮೀರೀ ಅಪಭ್ರಂಶ ಎನ್ನಬಹುದಾದ ಒಂದು ಅರ್ಧಸಾಲು ದೊರಕುತ್ತದೆ: 'ರಂಗಸ್ಸ ಹೇಲು ದಿಣ್ಣ' (ಹೇಲು ಎನ್ನುವ ಗ್ರಾಮವನ್ನು ರಂಗನಿಗೆ ಕೊಟ್ಟಿದೆ). ಇದು ಹತ್ತನೆಯ ಶತಮಾನದಲ್ಲಿ ಬರೆದ ಗ್ರಂಥ. ಈ ವಿಚಾರವಾಗಿ ಚಟರ್ಜಿಯವರು ಹೇಳುತ್ತಾರೆ-ಹಳೆಯ ಕಾಶ್ಮೀರಿ ಯುಗಕ್ಕಿಂತ ಹಿಂದೆ ಸಂಸ್ಕøತದ ಜೊತೆ ಆರ್ಯಭಾಷೆಯ ಪ್ರಾಕೃತ ಮತ್ತು ಅಪಭ್ರಂಶ ರೂಪವನ್ನೇ ಕಾಶ್ಮೀರದ ವಿದ್ವಾಂಸರೂ ಬಳಸುತ್ತಿದ್ದರು. ತಂತ್ರಸಾರದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಅಪಭ್ರಂಶದ ಎರಡೆರಡು ಶ್ಲೋಕಗಳಿವೆ. ಆದರೆ ಇದರಲ್ಲಿ ಕಾಶ್ಮೀರಿಯ ಲಕ್ಷಣಗಳೇನೂ ಕಾಣಿಸುವುದಿಲ್ಲ. ಮಹೇಶ್ವರಾನಂದನ ಮಹಾರ್ಥ ಮಂಜರಿಯಲ್ಲಿಯೂ 71 ಪ್ರಾಕೃತ ಶ್ಲೋಕಗಳಿವೆ. ಇದನ್ನು 1200ರಲ್ಲಿ ಬರೆಯಲಾಗಿದೆ ಎನ್ನಬಹುದು.

 ಕಾಶ್ಮೀರಿ ಭಾಷೆಯಲ್ಲಿ ನಮಗೆ ಸಿಗುವ ಅತಿ ಪ್ರಾಚೀನ ದಾಖಲೆ ಎಂದರೆ ಶಿತಿಕಂಠಾಚಾರ್ಯ ಸಂಸ್ಕøತದಲ್ಲಿ ಬರೆದ ಮಹಾನಯ ಪ್ರಕಾಶ ಎನ್ನುವ ಗ್ರಂಥದಲ್ಲಿ ಕಂಡುಬರುವ 94 ಶ್ಲೋಕಗಳು. ಇದೇ ಕಾಲದಲ್ಲಿ ಚುಮ್ಮಾ ಸಂಪ್ರದಾಯವೆಂಬ ಇನ್ನೊಂದು 74 ಶ್ಲೋಕಗಳ ಗ್ರಂಥವೂ ರಚಿಸಲ್ಪಟ್ಟಿತು. ಗ್ರಿಯರ್‍ಸನ್ ಇದರ ಕಾಲ 1500 ಎಂದೂ ಚಟರ್ಜಿ 1300 ಎಂದೂ ಅಭಿಪ್ರಾಯಪಡುತ್ತಾರೆ. ಹದಿನಾಲ್ಕನೆಯ ಶತಮಾನದಲ್ಲಿ ಲಾಲ್ ದೆದ್ ಎನ್ನುವ ಕವಯಿತ್ರಿಯೊಬ್ಬಳು ಕಾಶ್ಮೀರಿಯಲ್ಲಿ ಅನುಭಾವಿ ಕವಿತೆಗಳನ್ನು ಬರೆದಳು. ಈ ಕವಿತೆಗಳು ಜನಪದ ಸಂಪ್ರದಾಯದಲ್ಲಿ ನಮಗೆ ದೊರೆತ ಅತಿ ಪ್ರಾಚೀನ ದಾಖಲೆಗಳು ಎನ್ನಬಹುದು. ಲಲ್‍ವಾಖ್ ಎಂದು ಪ್ರಸಿದ್ಧವಾದ ಈ ಕವಿತೆಗಳು ಶಿವನನ್ನು ಕುರಿತಾದ ಅನುಭಾವಿ ರಚನೆಗಳು. ಲಾಲ್ ದೆದ್ದಳ ವೈವಾಹಿಕ ಜೀವನ ಸಫಲವಾಗಿರಲಿಲ್ಲ. ಆಕೆಯ ದಾರುಣ ಅನುಭವಗಳು ಈ ಕೃತಿಗಳ ಮೂಲಕ ವ್ಯಕ್ತವಾಗಿವೆ. ಆಕೆಯ ತರುವಾಯ 1500ರಷ್ಟಕ್ಕೆ ಶಾ ನೂರುದ್ದೀನ್ ಎನ್ನುವ ಇನ್ನೊಬ್ಬ ಮುಸ್ಲಿಂ ಸಂತ ಅನುಭಾವಿ ಶ್ರುಕ್ ಎಂಬ ಭಕ್ತಿಗೀತೆಗಳ ಗ್ರಂಥವನ್ನು ರಚನೆ ಮಾಡಿದ.

 ಮಧ್ಯಕಾಲ-ಪೂರ್ವಭಾಗ: 1500-1800. ಈ ಕಾಲದಲ್ಲಿ ಕಾಶ್ಮೀರೀ ಭಾಷೆ ರಾಜಾಶ್ರಯ ಪಡೆಯಿತು. ಅಬಿದೀನ್ ಎನ್ನುವ ಬಾದಶಾಹ ಅದನ್ನು ರಾಜಭಾಷೆಯಾಗಿ ಮಾಡಿದ. ಅವನ ಆಸ್ಧಾನದಲ್ಲಿ ಸಂಸ್ಕøತ, ಪರ್ಶಿಯನ್ ಮತ್ತು ಕಾಶ್ಮೀರೀ ಭಾಷೆಯ ಕವಿಗಳಿದ್ದರು. ಉತ್ಥಸೋಮ ಎಂಬ ಕವಿ ಕೆಲವು ಭಾವಗೀತೆಗಳನ್ನೂ ಅಬಿದೀನನ ಜೀವನ ಚರಿತ್ರೆಯನ್ನೂ ಮಾನಕ ಎಂಬ ಸಂಗೀತ ಲಕ್ಷಣ ಗ್ರಂಥವನ್ನೂ ಬರೆದ. ಭಟ್ಟಾವತಾರ ಎನ್ನುವ ಕವಿ ಬಾಣಾಸುರ ವಧ ಎನ್ನುವ ಕಥನಕಾವ್ಯವನ್ನೂ ಜೈನ ವಿಲಾಸ ಎನ್ನುವ ಗ್ರಂಥವನ್ನೂ ಬರೆದ. ಯೋಧ ಭಟ್ಟ ಎನ್ನುವ ಕವಿ ಜೈನಚರಿತ ಎನ್ನುವ ಜೀವನಚರಿತ್ರೆಯನ್ನೂ ಜೈನಪ್ರಕಾಶ ಎಂಬ ನಾಟಕವನ್ನೂ ಬರೆದ. ಇವುಗಳಲ್ಲಿ ಬಾಣಾಸುರ ವಧ ಎನ್ನುವ ಗ್ರಂಥ ಮಾತ್ರ ಈಗ ಉಪಲಬ್ಧವಾಗಿದೆ. ಇದು ಒಂದು ಶೃಂಗಾರಪ್ರಧಾನವಾದ ಪ್ರೇಮ ಕಾವ್ಯ. 1150ರ ವರೆಗಿನ ರಾಜಮನೆತನಗಳ ಚರಿತ್ರೆಯಾದ ರಾಜತರಂಗಿಣಿಯ ಮಾದರಿಯಲ್ಲಿಯೇ ಮುಂದಿನ ರಾಜರುಗಳ ಚರಿತ್ರೆಯಾದ ಅಬಿದೀನ್ ರಾಜ ಬರೆಸಿದ್ದಾನೆ. ಮುಲ್ಲಾ ಅಹಮದ್ ಎಂಬಾತ ರಾಜ ತರಂಗಿಣಿ ಮತ್ತು ಮಹಾಭಾರತವನ್ನು ಪರ್ಶಿಯನ್ ಭಾಷೆಗೆ ಅನುವಾದ ಮಾಡಿದ್ದಾನೆ. ಶ್ರೀವರನೆಂಬಾತ ಯೂಸುಫ್ ಜುಲೈಕ ಎನ್ನುವ ಪರ್ಶಿಯನ್ ಪ್ರೇಮ ಕಾವ್ಯವನ್ನು ಸಂಸ್ಕøತಕ್ಕೆ ಅನುವಾದ ಮಾಡಿದ್ದಾನೆ.

 1500ರಿಂದೀಚಿಗೆ ಬರಬರುತ್ತ ಬ್ರಾಹ್ಮಣ ಸಂಪ್ರದಾಯದ ಶೈವ ಅನುಭಾವಿಗಳ ಸಂಖ್ಯೆ ಕಡಿಮೆಯಾಗುತ್ತ ಬಂತು. ಇಸ್ಲಾಂ ಪಂಥದ ಸೂಫೀ ಸಂಪ್ರದಾಯ ಪ್ರಬಲವಾಯಿತು. ಇದರಿಂದಾಗಿ ಕಾಶ್ಮೀರೀ ಭಾಷೆ ಮತ್ತು ಸಾಹಿತ್ಯದಲ್ಲಿ ಆಧುನಿಕತೆಯ ಕಳೆ ಕೂಡಿಬಂತು. ಕಾಶ್ಮೀರದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯೂ ಇದಕ್ಕೆ ಕಾರಣವಾಯಿತು ಎನ್ನಬಹುದು. ಈ ಕಾಲದಲ್ಲಿ ಕಾಶ್ಮೀರ ಮೂರು ಮಹಾ ಸಾಮ್ರಾಟರ ಅಧೀನಕ್ಕೆ ಒಳಪಟ್ಟಿತು. ಕ್ರಿ.ಶ. 1586ರಲ್ಲಿ ಕಾಶ್ಮೀರ ಸುಲ್ತಾನರ ಪತನವಾದ ಮೇಲೆ 1748ರವರೆಗೆ ಮೊಗಲ ಸುಲ್ತಾನರು ಆಳಿದರು. ಆಮೇಲೆ 1820ರವರೆಗೆ ಆಫ್ಪನ್ ರಾಜನ ವಶಕ್ಕೊಳಪಟ್ಟಿತು. ಇದರಿಂದಾಗಿ ಹಿಂದೂ ಧರ್ಮ ಮತ್ತು ಸಂಸ್ಕøತದ ಪ್ರಭಾವ ಕುಗ್ಗಿ ಇಸ್ಲಾಂ ಧರ್ಮ ಮತ್ತು ಸೂಫೀ ಸಂಪ್ರದಾಯದ ಪ್ರಾಬಲ್ಯ ಹೆಚ್ಚಾಯಿತು. ಆದರೂ ಹಿಂದೂ ಹಾಗೂ ಸೂಫೀ ಸಂಪ್ರದಾಯಗಳ ಸಾಮರಸ್ಯವನ್ನು ಇಲ್ಲಿ ನಾವು ಕಾಣುತ್ತೇವೆ. ಸಾಹಿತ್ಯದಲ್ಲಿ ಮಾತ್ರ ಈ ಸಾಮರಸ್ಯ ಅಷ್ಟೊಂದು ಕಾಣಬರುವುದಿಲ್ಲ. ಈ ಕಾಲದಲ್ಲಿ ಪ್ರಕಟವಾದ ಕಾವ್ಯಗಳೆಲ್ಲ ಪರ್ಶಿಯನ್ ಕಾವ್ಯಗಳ ಪಡಿಯಚ್ಚುಗಳಂತಿವೆ. ಹಿಂದೂ ಕವಿಗಳು ಮಾತ್ರ ಪುರಾಣದಿಂದ ಆರಿಸಿದ ಕಥಾವಸ್ತುಗಳನ್ನು ಉಪಯೋಗಿಸಿದ್ದಾರೆ. ಭಾಷೆ, ಶಬ್ದಗಳು, ಮತ್ತು ಅಲಂಕಾರಗಳಲ್ಲಿ ಕವಿಯ ಧಾರ್ಮಿಕ ಹಿನ್ನೆಲೆಯನ್ನು ಕಾಣಬಹುದು. ಈ ಯುಗದ ಕೆಲವು ಮುಖ್ಯವಾದ ಕವಿಗಳ ಹೆಸರುಗಳು ಹೀಗಿವೆ. ಹಬ್ಬ ಖೋತನ್ (1600) ಎಂಬ ಕವಯಿತ್ರಿ ತನ್ನ ಭಾವಗೀತೆಗಳಿಂದಾಗಿ ಪ್ರಸಿದ್ಧಳಾಗಿದ್ದಾಳೆ. ವಿವಾಹ ವಿಚ್ಛೇದ ಪಡೆದು ಪುನರ್ವಿವಾಹವಾದ ಈಕೆಯ ಪ್ರೇಮ, ಆಸೆ, ಭಾವೋದ್ವೇಗಗಳು ಕಾವ್ಯದಲ್ಲಿ ಪ್ರತಿಬಿಂಬಿತವಾಗಿವೆ. ಅರಿನ್‍ಮಾಲ್ (1800) ಕವಿಯ ಭಾವಗೀತೆಗಳಲ್ಲಿ ಭಕ್ತಿಭಾವನೆಗಳೂ ತುಂಬಿವೆ. ಹಬೀಬುಲ್ಲ ನೌಶಹರಿ (1700) ಕೂಡ ಭಾವಗೀತೆಗಳನ್ನು ರಚಿಸಿದ್ದಾನೆ. ಜಹಾಂಗೀರನ ಸಮಕಾಲೀನನಾದ ಸಾಹಿಬ್ ಕೌಲ್ ಎಂಬ ಕವಿ ಕೃಷ್ಣಾವತಾರ ಮತ್ತು ಜನಮಚರಿತ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ರೂಪಭವಾನಿ (1720) ಸಂಸ್ಕøತ ಮಿಶ್ರಿತ ಭಾಷೆಯಲ್ಲಿ ಧಾರ್ಮಿಕ ಗೀತೆಗಳನ್ನು ರಚಿಸಿದ್ದಾನೆ. ಪ್ರಕಾಶ್ರಮ (1700) ರಾಮಾವತಾರಚರಿತವನ್ನು ಬರೆದಿದ್ದಾನೆ. ಈ ಕೆಲವು ಕಾವ್ಯಗಳ ಕಥಾವಸ್ತು ಹಿಂದೂ ಪುರಾಣಗಳಿಂದ ಆರಿಸಿದ್ದಾದರೂ ಅವುಗಳ ಮೇಲೆ ಪರ್ಶಿಯನ್ ಪ್ರಭಾವ ಬಿದ್ದಿದೆ. ಮಿರ್ ಅಬ್ದುಲ್ಲ (1807) ಅವರ ಕೋಶುರ್ ಆಕ್ವಿದ ಮತ್ತು ಮಕ್ತಾಸರ್‍ವಕಾಯ ಎಂಬ ಧಾರ್ಮಿಕ ಪದ್ಯಗಳೂ ಗಂಗಾಪ್ರಸಾದನ ಶೋಕ್ ದುಖ್ ಚರಿತ ಎಂಬ ಪದ್ಯಗಳೂ ಪ್ರಸಿದ್ಧವಾಗಿವೆ.

 ಮಧ್ಯಕಾಲ-ಉತ್ತರಭಾಗ: 1800-1900. ಹದಿನೆಂಟನೆಯ ಶತಮಾನ ಮತ್ತು ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧ ಭಾಗದ ಕವಿಗಳು ಪರ್ಶಿಯನ್‍ಭಾಷೆ ಹಾಗೂ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಆಮೇಲೆ ಬಂದ ಕವಿಗಳು ಪುರಾಣದ ಕಥಾವಸ್ತುಗಳಿಂದ ಮಾತ್ರವಲ್ಲದೆ ಜನಪದ ಸಾಹಿತ್ಯದಿಂದಲೂ ಸ್ಛೂರ್ತಿ ಪಡೆದರು. ಈ ಕಾಲವನ್ನು ಕಾಶ್ಮೀರೀ ಸಾಹಿತ್ಯದ ಸುವರ್ಣಕಾಲವೆನ್ನಬಹುದು. ಈ ಕಾಲದ ಕವಿಗಳಲ್ಲಿ ಈ ಕೆಳಗಿನವರು ಪ್ರಸಿದ್ಧರಾಗಿದ್ದಾರೆ. ಪರಮಾನಂದ (1880) ಎನ್ನುವ ಕವಿ ಶಿವಪಾರ್ವತಿಯರ ಮೇಲೆ ಶಿವಲಗನ್ ಎಂಬ ಭಕ್ತಿ ಕಾವ್ಯವನ್ನು ರಚಿಸಿದ್ದಾನೆ. ರಾಧಾ ಸ್ವಯಂವರ್ ಮತ್ತು ಸೋದಾಮ್ ಚರಿತ ಇವನ ಇನ್ನೆರಡು ಕೃತಿಗಳು. ಮೊಹಮದ್ ಗಾಮಿ (1855) ಯೂಸುಫ್ ಜುಲೈಕ, ಶಿರಿನ್ ಖುಸ್‍ರೋ, ಲೈಲಾ-ವ-ಮಜ್ನು ಮುಂತಾದ ಶೃಂಗಾರ ಕಾವ್ಯಗಳನ್ನು ರಚಿಸಿದ್ದಾನೆ. ಮುಕ್‍ಬುಲ್‍ಶಾ ಪರ್ಶಿಯನ್ ಸಾಹಿತ್ಯದ ಪ್ರೇಮಕಥೆಯೊಂದರ ಆಧಾರದ ಮೇಲೆ ಗುಲ್‍ರೆಜ್ ಎನ್ನುವ ಕಾವ್ಯ ಬರೆದಿದ್ದಾನೆ. ಗ್ರೀಸ್ತ್‍ನಾಮ ಎಂಬ ಗ್ರಾಮೀಣ ಜೀವನದ ಕಥೆಯನ್ನೂ ವಿಡಂಬನೆಯ ರೂಪದಲ್ಲಿ ಬರೆದಿದ್ದಾನೆ. ಲಖ್‍ಮಂಜು ಬರೆದ ನಳದಮಯಂತಿ, ವಹಾಬ್ ಪರೆ ಬರೆದ ಶಹ್‍ನಾಮಾ, ರಸೂಲ್ ಮೀರ್ ಬರೆದ ಗಜûಲ್‍ಗಳು-ಇವೂ ಪ್ರಸಿದ್ಧವಾಗಿವೆ. ಉಪನಿಷತ್ತಿನ ಶುನಶ್ಯೇಪಾ ಖ್ಯಾನದ ಆಧಾರದ ಮೇಲೆ ರಚಿತವಾದ ರಮ್eóÁನ್‍ಬಟ್‍ನ ಅಖನಂದುಮ್ ಕೂಡ ಪ್ರಸಿದ್ಧವಾಗಿದೆ. ಕಲಂದರ್ ಶಾ, ನಾಜಿûಮ್, ಮಿಸ್‍ಕೀನ್, ಖ್ವಾಜಾ ಅಕ್‍ರಮ್, ಅಜಿûೀeóï ದರ್‍ವೇಶ್, ವಾಹಬ್, ಖಾರ್, ಮಿರ್ಜಾ ಕಾಕ್ ಮುಂತಾದವರೂ ಈ ಕಾಲದ ಪ್ರಸಿದ್ಧ ಕವಿಗಳು.

 ಆಧುನಿಕ ಯುಗ: ಕ್ರಿ.ಶ. 1900-1946. ದೇಶ ಸಾಂಸ್ಕøತಿಕ ಪುನರುಜ್ಜೀವನವನ್ನು ಪಡೆದಾಗ ಕಾಶ್ಮೀರೀ ಸಾಹಿತ್ಯದ ಆಧುನಿಕ ಯುಗ ಪ್ರಾರಂಭವಾಯಿತೆನ್ನಬಹುದು. ಆಗಲೇ ಜನ ತಮ್ಮ ಭಾಷೆಗಳ ಸೌಂದರ್ಯವನ್ನು ಮನಗಂಡು ಸಾಹಿತ್ಯ ಮತ್ತು ಸಂಸ್ಕøತಿಯ ಮಹತ್ತ್ವವನ್ನು ಅರಿಯತೊಡಗಿದರು. ಏಷ್ಯಖಂಡದಲ್ಲೆಲ್ಲ ರಾಷ್ಟ್ರೀಯ ಜಾಗೃತಿ ಹಾಗೂ ಸ್ವಾತಂತ್ರ್ಯಪ್ರೇಮ ಹುಟ್ಟಿದ ಕಾಲವದು. ಕಾಶ್ಮೀರದ ಕಣಿವೆಯೂ ಅದರ ಪ್ರಭಾವಕ್ಕೊಳಪಟ್ಟಿತು. ಈ ಹೊಸ ಭಾವನೆಗಳಿಂದ ಪ್ರೇರಿತನಾದ ಮಹ್‍ಜೂರ್ ಎಂಬ ಕವಿಯ ಕಾವ್ಯದಲ್ಲಿ ಶೃಂಗಾರರಸದೊಡನೆ ದೇಶಭಕ್ತಿ ಮತ್ತು ಪ್ರಕೃತಿ ಪ್ರೇಮವನ್ನು ನೋಡಬಹುದು. ಈತನನ್ನು ಕಾಶ್ಮೀರೀ ಸಾಹಿತ್ಯದ ಹೊಸ ಯುಗದ ಪ್ರವರ್ತಕ ಎನ್ನಬಹುದು. ಕೃಷ್ಣರಾeóïದಾನ್ (ರಾಜಾನಕ) ಇನ್ನೊಬ್ಬ ಪ್ರತಿಭಾವಂತ ಕವಿ. ಆತ ಪ್ರಕೃತಿವರ್ಣನೆ ಮತ್ತು ಗೀತರೂಪಕಗಳಿಗೆ ಪ್ರಸಿದ್ಧನಾಗಿದ್ದಾನೆ. ಆತನ ಶಿವಪರಿಣಯದಲ್ಲಿ ತುಲಸೀದಾಸನ ರಾಮಾಯಣದಂತೆ ಭಕ್ತಿ ಮತ್ತು ಅನುಭಾವದ ಸಮನ್ವಯವಿದೆ. ಜಿಂದ ಕೌಲ್ ಬರೆದ ಸುಮ್‍ರನ್ ಕೂಡ ಅನುಭಾವಿ ಕವನಗಳ ಸಂಗ್ರಹ. ನಾರಾಯಣ ಖರ್ ಎಂಬಾತ ಭಗವದ್ಗೀತೆಯನ್ನೂ ಮನಜೂ ಅತ್ತಾರ್ ಎಂಬಾತ ಭಾಗವತ ಪುರಾಣವನ್ನೂ ಅನುವಾದ ಮಾಡಿದ್ದಾರೆ.

 ಸಮಕಾಲೀನ ಯುಗ : ಕ್ರಿ.ಶ. 1947-. ಗದ್ಯಸಾಹಿತ್ಯದ ವಿಕಾಸದ ದೃಷ್ಟಿಯಿಂದ ಈ ಯುಗ ತುಂಬ ಮಹತ್ತ್ವಪೂರ್ಣವಾಗಿದೆ. ಗದ್ಯಸಾಹಿತ್ಯದ ಪರಂಪರೆ ಆಧುನಿಕ ಯುಗದಲ್ಲಿಯೇ ಪ್ರಾರಂಭವಾದರೂ ಗದ್ಯದ ವಿಕಾಸ 1947ರಿಂದ ಈಚೆಗೆ ಪ್ರಾರಂಭವಾಯಿತೆನ್ನಬಹುದು. ಪರ್ಸೋ ಅರ್ಯಾಬಿಕ್ ಲಿಪಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡ ಮೇಲೆ ಇದರಲ್ಲಿ ಗದ್ಯ ಕೃತಿಗಳನ್ನು ಪ್ರಕಟಿಸುವ ಕಾರ್ಯ ಆರಂಭವಾಯಿತು. ಕಾಶ್ಮೀರೀ ಗದ್ಯದ ವಿಕಾಸದಲ್ಲಿ ಆಕಾಶವಾಣಿಯ ಪಾತ್ರ ತುಂಬ ಮಹತ್ತ್ವದ್ದಾಗಿದೆ. ಕಾದಂಬರಿ, ಕಥೆ, ನಾಟಕ, ಕಾವ್ಯ, ಲೇಖನ ಇಲ್ಲ ಈಗ ಕಾಶ್ಮೀರಿಯಲ್ಲಿ ಪ್ರಕಟವಾಗುತ್ತಿವೆ.

 ಹಿಂದೀ ಮತ್ತು ಇತರ ಸಮಕಾಲೀನ ಭಾಷೆಗಳ ಸಾಹಿತ್ಯದಲ್ಲಿ ಕಂಡುಬರುವ ಪ್ರವೃತ್ತಿಗಳೆಲ್ಲವೂ ಕಾಶ್ಮೀರಿಯಲ್ಲಿಯೂ ಕಂಡುಬರುತ್ತವೆ. ಹಳೆಯ ಪ್ರವೃತ್ತಿಗಳ ಪುನರುಜ್ಜೀವವನ್ನು ನಾವು ಮತ್ತೆ ಇಲ್ಲಿ ನೋಡಬಹುದು. ಜನಪದ ಗೀತೆಗಳ ನಾದಮಾಧುರ್ಯ, ಪ್ರತೀಕಾತ್ಮಕತೆ, ಪ್ರಕೃತಿ ವರ್ಣನೆ, ಲಾವಣಿಯ ವೃತ್ತಗಳು ಎಲ್ಲವನ್ನು ಈ ಯುಗದಲ್ಲಿ ಕಾಣಬಹುದು. ಆಧುನಿಕ ಪೀಳಿಗೆಯ ಕವಿಗಳು ಜನಪದ ಸಂಪ್ರಾದಾಯ ಶೈಲಿಗಳನ್ನು ತಮ್ಮ ಅಭಿವ್ಯಕ್ತಿಗೆ ಸಾಧನವಾಗಿ ಬಳಸಿಕೊಳ್ಳುವ ಹವ್ಯಾಸದಲ್ಲಿ ತೊಡಗಿದ್ದಾರೆ. ಹಿಂದೀ, ಉರ್ದು, ಬಂಗಾಲಿ ಮತ್ತು ಪಂಜಾಬಿ ಕಥೆಕಾದಂಬರಿಗಳು ಕಾಶ್ಮೀರೀ ಭಾಷೆಗೆ ಅನುವಾದವಾಗಿವೆ. ಈ ಯುಗದ ಪ್ರಸಿದ್ಧ ಕವಿಗಳು ನಾದಿಮ್, ರಾಹೀ, ಆeóÁದ್, ಕಾಮಿಲ್, ನಾಜ್‍ಕೀ, ಬರ್ಕ್, ರೋಸನ್, ಪ್ರೇಮಿ, ಮಜ್‍ಬೂರ್, ಅಲ್‍ಮಸ್ತ್, ಫಿರಾಕ್, ಚಮನ್, ಬೇಕಸ್, ಆಜಿûಮ್, ಕುಂದನ್, ಸಾಕೀ, ಖಾಯಾಲ್, ಫಾಜಿûಲ್, ಫಾನೀ, ಅಂಬಾರ್‍ದಾರ್, ವಲೀ ಮುಂತಾದವರು.

 ಕಾಶ್ಮೀರಿಯಲ್ಲಿ ಪತ್ರಿಕಾ ವ್ಯವಸಾಯ ಇನ್ನೂ ಪ್ರಾರಂಭವಾಗಬೇಕಷ್ಟೆ. 1947ರಿಂದ ಗದ್ಯದ ವಿಕಾಸವಾಗುತ್ತಿದ್ದರೂ ಪತ್ರಿಕಾ ವ್ಯವಸಾಯ ಪ್ರಾರಂಭವಾಗಲಿಲ್ಲ. ಗದ್ಯ ಹಾಗೂ ಕಥಾ ಸಾಹಿತ್ಯವನ್ನು ಬೆಳೆಸಿದವರಲ್ಲಿ ಈ ಕೆಳಗಿನ ಹೆಸರುಗಳನ್ನು ಸ್ಮರಿಸಬಹುದು. ಮೊಹಿದ್ದಿನ್, ಅಮೀನ್ ಕಾಮಿಲ್, ಸೋಮನಾಥ ಜಿûತ್‍ಸೀ. ಆಲಿಮೊಹಮ್ಮದ್ ಲೋನ್, ದೀಪಕ್ ಕೌಲ್ ಅವತಾರ್ ಕೃಷ್ಣನ್ ರೆಹ್‍ಬರ್ ಸೂಫಿ ಗುಲಾಂ ಮೊಹಮ್ಮದ್, ಹೃದಯ್ ಕೌಲ್ ಭಾರತೀ, ಉಮೇಶ್ ಕೌಲ್, ಬನ್‍ಸೀ ನಿರ್ದೊಶ್ೀ, ಪುಷ್ಕಾರ್ ಭಾನ್, ಶಂಕರ್ ರೈನಾ ಮತ್ತು ಫಾರೋಕ್ ನಾeóïಕೀ.

 ವಿಚಾರ ಸಾಹಿತ್ಯವೂ ಇತ್ತೀಚೆಗೆ ಬೆಳೆಯುತ್ತಿದೆ. ಈ ದಿಶೆಯಲ್ಲಿ ಜಿಯಾಲಾಲ್ ಕೌಲ್, ಪುಷ್ಪ್, ಹಂಡೂ, ಓಂಕಾರ್‍ನಾಥ್ ಕಾಚ್‍ರು. ಓಂಕಾರ್‍ನಾಥ್ ಕೌಲ್, ಹಾಜಿನೀ, ರತ್ತನ್ ಲಾಲ್ ಶಾಂತ್, ಮೋಹನ್‍ಕೃಷ್ಣನ್ ಧರ್, ನಂದಲಾಲ್ ಛತ್ತ ಇವರುಗಳ ಪ್ರಯತ್ನ ಶ್ಲಾಘನೀಯವಾಗಿದೆ.

 ಕಾಶ್ಮೀರೀ ಸಾಹಿತ್ಯ ಹೆಚ್ಚಿನ ಜನರ ಗಮನವನ್ನು ಇನ್ನೂ ಸೆಳೆಯಲಿಲ್ಲ. ಅದಕ್ಕೆ ರಾಜಕೀಯ ಹಾಗೂ ಶೈಕ್ಷಣಿಕ ಕಾರಣಗಳೂ ಇಲ್ಲದಿಲ್ಲ. ಕಾಶ್ಮೀರೀ ಜನತೆಯ ಮನೋಭಾವವೂ ಇದಕ್ಕೆ ಒಂದು ಮುಖ್ಯ ಕಾರಣ. ಕಾಶ್ಮೀರೀ ವಿಶ್ವವಿದ್ಯಾಲಯದಲ್ಲಿ ಕೂಡ ಕಾಶ್ಮೀರೀ ಭಾಷೆಯ ಅಧ್ಯಯನವಾಗಲಿ, ಸಂಶೋಧನೆಯಾಗಲಿ ನಡೆಯುತ್ತಿಲ್ಲ. ಕಾಶ್ಮೀರೀ ಸಾಹಿತ್ಯದ ಉದಯ ಮತ್ತು ವಿಕಾಸದ ವಿಚಾರವಾಗಿ ಈಗ ತಾನೇ ಅಧ್ಯಯನ ಪ್ರಾರಂಭವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸಾಹಿತ್ಯ ಪರಿಷತ್ತು ಕಾಶ್ಮೀರೀ ಸಾಹಿತ್ಯದ ಅಭಿವೃದ್ಧಿಗಾಗಿ ಶ್ರಮಿಸತೊಡಗಿದೆ ಮತ್ತು ಶಿರಾಜ್ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಅನೇಕ ಹಸ್ತಪ್ರತಿಗಳನ್ನು ಪ್ರಕಟಿಸಿದೆ. ಕೋಶ ರಚನಾ ಕಾರ್ಯವನ್ನು ಕೈಗೊಂಡಿದೆ. ಕುರುಕ್ಷೇತ್ರ ವಿಶ್ವವಿದ್ಯಾಲಯವೂ ಕಾಶ್ಮೀರೀ ಭಾಷೆಯ ಮೇಲೆ ಸಂಶೋಧನೆಯನ್ನು ಕೈಗೊಂಡಿದೆ. ಭಾರತೀಯ ಭಾಷೆಗಳ ಕೇಂದ್ರೀಯ ಅಧ್ಯಯನ ಸಂಸ್ಥೆ ತನ್ನ ಪಾಟಯಾಲಾ ಶಾಖೆಯಲ್ಲಿ ಕಾಶ್ಮೀರೀ ಭಾಷೆಯ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯವನ್ನು ಕೈಗೊಂಡಿದೆ.       

 (ಜೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ